ನೀರು ಕಣಗಿಲೆ -
	ಪಾಲಿಗೊನೇಸೀ ಕುಟುಂಬಕ್ಕೆ ಸೇರಿದ ಸಸ್ಯ. ಪಾಲಿಗೋನಮ್ ಗ್ಲಾಬ್ರಮ್ ಇದರ ಶಾಸ್ತ್ರೀಯ ನಾಮ. ನೀರುಸಣ್ಣಿ ಸೊಪ್ಪು ಪರ್ಯಾಯ ನಾಮ. ಭಾರತದಾದ್ಯಂತ ಕಾಣದೊರೆಯುತ್ತದೆ. ಕೆರೆಗಳಲ್ಲಿ ನಾಲೆಗಳಲ್ಲಿ ಹುಲುಸಾಗಿ ಬೆಳೆಯುವುದು. ಇದು 1.5 ಮೀಟರ್ ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಸಸ್ಯ. ಗೆಣ್ಣುಗಳ ಬಳಿ ಬೇರೊಡೆದು ಬೆಳೆಯುವುದು ಇದರ ಒಂದು ಲಕ್ಷಣ. ಎಲೆಗಳು ಸರಳ; ಪರ್ಯಾಯ ರೀತಿಯಲ್ಲಿ ಜೋಡಣೆಗೊಂಡಿವೆ; ಎಲೆಗಳ ಆಕಾರ ಈಟಿಮೊನೆಯಂತೆ ಹೂಗೊಂಚಲುಗಳು ಎಲೆಯ ಕಂಕುಳಲ್ಲೋ, ರೆಂಬೆಯ ತುದಿಯಲ್ಲೋ ಹುಟ್ಟುವುವು; ಇವು ಸಂಕೀರ್ಣ ಮಾದರಿಯವು. ಹೂಗಳಿಗೆ ಉಪಪತ್ರಗಳುಂಟು 4-5 ಪೆರಿಯಾಂತ್ ಹಾಲೆಗಳಿವೆ. ಹೂಗಳ ಬಣ್ಣ ಹಸುರು ಬಿಳಿ, ಕೆನ್ನೀಲಿ ಅಥವಾ ಕೆಂಪು. ಹೂಗಲ್ಲಿ 5-8 ಕೇಸರಗಳು. 2 ಅಥವಾ 3 ಕಾರ್ಪೆಲ್‍ಗಳಿಂದ ಕೂಡಿದ ಉಚ್ಛ ಸ್ಥಾನದ ಅಂಡಾಶಯುವುಂಟು. ಹಣ್ಣು ಮೂರು ಮೂಲೆಯ ಒಂದೇ ಬೀಜವುಳ್ಳ ನಟ್‍ಲೆಟ್ ಎಂಬ ಬಗೆಯದು.

	ನೀರುಕಣಗಿಲೆ ಗಿಡಕ್ಕೆ ಔಷಧೀಯ ಮಹತ್ವವುಂಟು. ನ್ಯೂಮೋನಿಯಾ, ಹೊಟ್ಟೆನುಲಿತ, ಜ್ವರಗಳಲ್ಲಿ ಎಲೆಯ ಕಷಾಯವನ್ನು ಕೊಡುವುದಿದೆ. ಬೇರನ್ನು ಮೂಲವ್ಯಾಧಿ, ಕಾಮಾಲೆ, ಕ್ಷಯ ಮುಂತಾದವುಗಳ ಚಿಕಿತ್ಸೆಯಲ್ಲಿ ಬಳಸುವರು.
(ಟಿ.ಎನ್.ಎಸ್.)
ಪರಿಷ್ಕರಣೆ : ಹರೀಶ್ ಭಟ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ